ದಲಿತ ಯುವಕ ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ  ವಿವಿಧ ಸಂಘಟನೆಗಳಿಂದ ಮನವಿ

ಭಾಸ್ಕರ ಪತ್ರಿಕೆ
0

ತುಮಕೂರು: ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ದಲಿತ ಯುವಕ ಸಿಂಹಾದ್ರಿ ಅವರ ಹತ್ಯೆಯನ್ನು ಖಂಡಿಸಿರುವ ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಅವರು, ಸೆ.20ರಂದು ಗಣೇಶ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಗ್ರಾಮದ ಇತರೆ ಸಮುದಾಯದ ಯುವಕರು ಕುಲ್ಲಕ ಕಾರಣಕ್ಕೆ ಸಿಂಹಾದ್ರಿ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು ಎಂದು ಆರೋಪಿಸಿದರು.

ರಾಜ್ಯದಲ್ಲಿ ದಲಿತ ಗೃಹ ಸಚಿವರು ಇರುವ ಸಂದರ್ಭದಲ್ಲಿ ದಲಿತರ ಮೇಲೆಯೇ ಹೆಚ್ಚಿನ ಸಂಖ್ಯೆಯಲ್ಲಿ ದೌರ್ಜನ್ಯಗಳು ನಡೆಯುತ್ತಿರುವುದು ದುರ್ದೈವಕರ, ಮಧುಗಿರಿ ತಾಲೂಕಿನಲ್ಲಿ ನಡೆದಿರುವ ದೌರ್ಜನ್ಯದಲ್ಲಿ ಭಾಗಿಯಾಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಕಸಾಪುರಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಸೌಹಾರ್ದ ವಾತಾವರಣ ಮೂಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ದಲಿತರ ಹತ್ಯೆ ಸೇರಿದಂತೆ ವಿವಿಧ ಘಟನೆಗಳು ನಡೆದಿವೆ. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತರಿತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

simhadri
ಕೊಲೆಯಾದ ಯುವಕ ಸಿಂಹಾದ್ರಿ

ಜಾತ್ಯತೀತತೆ, ಸಂವಿಧಾನ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಹೊಂದಿರುವ ಸರ್ಕಾರ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದ ಸಚಿವರು, ಅಧಿಕಾರಿಗಳು ಹಾಗೂ ದಲಿತಪರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮಗಳಲ್ಲಿ ಕೋಮುಸೌಹಾರ್ದತೆ ಮೂಡಿಸಬೇಕಾದ ಜವಾಬ್ದಾರಿ ಇರುವ ಇಲಾಖೆಗಳ ಅಧಿಕಾರಿಗಳು ಜಾಗೃತಿಯಿಂದ ಕೆಲಸ ನಿರ್ವಹಿಸಬೇಕಿದೆ. ಕಸಾಪುರದಲ್ಲಿ ನಡೆದಿರುವ ದಲಿತ ಯುವಕನ ಹತ್ಯೆ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಬೇಕು ಹಾಗೂ ಮುಂದೆ ಈ ರೀತಿಯ ವಾತಾವರಣ ನಡೆಯದಂತೆ ಎಚ್ಚರಿಕೆ ವಹಿಸುವುದರೊಂದಿಗೆ, ಸೂಕ್ತ ರಕ್ಷಣೆ ಒದಗಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ದಲಿತ ಮುಖಂಡರಾದ ವಾಳೇಚಂದ್ರಯ್ಯ, ನರಸಿಂಹಯ್ಯ, ಕೇಬಲ್ ರಘುಕುಮಾರ್, ಶಿವನಂಜಪ್ಪ, ಗಂಗಾಧರ್, ಸೋರ್ಣುಕುಂಟಿ ನಂದೀಶ್, ಗೋಪಾಲಕೃಷ್ಣ, ಜಯಮೂರ್ತಿ, ರಾಜೇಶ್, ಎಸ್. ರಾಜಣ್ಣ, ಅಕ್ಷರ ದಾಸೋಹ ಶಿವಣ್ಣ, ರೂಪಕಲಾ ಸೇರಿದಂತೆ ಇತರರು ಇದ್ದರು.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

 

The post ದಲಿತ ಯುವಕ ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ  ವಿವಿಧ ಸಂಘಟನೆಗಳಿಂದ ಮನವಿ appeared first on nammatumakuru.



from nammatumakuru https://ift.tt/fDwAHlt

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*