ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಡಿ ಪ್ರತಿ ತಿಂಗಳು ನೀಡಲಾಗುವ 2,000 ರೂ. ನಗದು ವರ್ಗಾವಣೆ ಪಡೆಯಲು ಸರ್ಕಾರವು ಹೊಸ ಮತ್ತು ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ನೈಜ ಫಲಾನುಭವಿಗಳನ್ನು ಮಾತ್ರ ಗುರುತಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಪತಿಯ ಆಧಾರ್ ಸಂಖ್ಯೆ ಕಡ್ಡಾಯ: ಇದುವರೆಗೆ ಕೇವಲ ಮನೆಯ ಯಜಮಾನಿ (ಮಹಿಳೆ)ಯ ಆಧಾರ್ ಕಾರ್ಡ್ ಮಾತ್ರ ಅಗತ್ಯವಿತ್ತು. ಆದರೆ ಇನ್ನು ಮುಂದೆ ಅರ್ಜಿ ಸಲ್ಲಿಸಿದ ಮಹಿಳೆಯೊಂದಿಗೆ ಆಕೆಯ ಪತಿಯ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು.
ಸಾಲ ಮುಕ್ತ ಬ್ಯಾಂಕ್ ಖಾತೆ: ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ನೀಡಿರುವ ಬ್ಯಾಂಕ್ ಖಾತೆಗೆ ಯಾವುದೇ ರೀತಿಯ ಸಾಲದ ಲಿಂಕ್ ಇರಬಾರದು. ಸಾಲ ಇರುವ ಖಾತೆಗಳನ್ನು ನೀಡಿದರೆ ಹಣ ವರ್ಗಾವಣೆ ತಕ್ಷಣವೇ ಸ್ಥಗಿತಗೊಳ್ಳಲಿದೆ.
ಹೆಸರು ಮತ್ತು ವಿಳಾಸದ ತಾಳೆ: ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಮಹಿಳೆಯ ಹೆಸರು ಮತ್ತು ವಿಳಾಸದಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಮಾಸಿಕ ಸಹಾಯಧನ ಸ್ಥಗಿತಗೊಳ್ಳಲಿದೆ.
ಮನೆಮನೆ ಭೇಟಿ ಹಾಗೂ ಫೇಶಿಯಲ್ ದೃಢೀಕರಣ: ಯೋಜನೆಯ ಮರುಪರಿಶೀಲನೆಗಾಗಿ ವಿಶೇಷ ತನಿಖಾ ತಂಡ ಅಥವಾ ಗಣತಿದಾರರನ್ನು ನಿಯೋಜಿಸಲಾಗಿದೆ. ಇವರು ನೇರವಾಗಿ ಮನೆಗಳಿಗೆ ಭೇಟಿ ನೀಡಿ, ಮಹಿಳೆಯರ ಮುಖದ ಗುರುತು ಹಿಡಿಯುವ ‘ಫೇಶಿಯಲ್ ದೃಢೀಕರಣ’ ಹಾಗೂ ಜಿಪಿಎಸ್ ಆಧಾರಿತ ಮನೆ ಫೋಟೋವನ್ನು ಸ್ಥಳದಲ್ಲೇ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.
17 ಪ್ರಶ್ನೆಗಳ ಹೊಸ ಅರ್ಜಿ ನಮೂನೆ: ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರನ್ನು ಯೋಜನೆಯಿಂದ ಸಂಪೂರ್ಣವಾಗಿ ಹೊರಗಿಡಲು 17 ಪ್ರಶ್ನೆಗಳನ್ನು ಒಳಗೊಂಡ ಹೊಸ ಅರ್ಜಿ ನಮೂನೆಯನ್ನು ಸಿದ್ಧಪಡಿಸಲಾಗಿದೆ.
ಮರುಪರಿಶೀಲನೆ ಪ್ರಕ್ರಿಯೆ ಯಾವಾಗ?
ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡ ತಕ್ಷಣವೇ ಈ ಮರುಪರಿಶೀಲನಾ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಗಲಿದೆ. ಮುಖ್ಯಮಂತ್ರಿಗಳ ಕಚೇರಿಯಿಂದ ಈ ಹೊಸ ಅರ್ಜಿ ನಮೂನೆಗೆ ಅಂತಿಮ ಒಪ್ಪಿಗೆ ದೊರೆತ ಕೂಡಲೇ ಅಧಿಕಾರಿಗಳು ಮನೆಮನೆ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ.
The post ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಕಠಿಣ ನಿಯಮ: ಇನ್ಮುಂದೆ ಪತಿಯ ಆಧಾರ್ ಸಂಖ್ಯೆ ಕಡ್ಡಾಯ! appeared first on Mahanayaka.
from Mahanayaka https://ift.tt/AoSbGBy
