ತುಮಕೂರು: ಗಣೇಶ ವಿಸರ್ಜನೆ ವೇಳೆ ಸಿಂಹಾದ್ರಿ ಹತ್ಯೆ – ಸಂತ್ರಸ್ತ ಕುಟುಂಬಕ್ಕೆ ಸಿಪಿಐ(ಎಂ), ಸಿಐಟಿಯು ಹಾಗೂ ಪಿಯುಸಿಎಲ್ ನಿಯೋಗದಿಂದ ಸಾಂತ್ವನ

ಭಾಸ್ಕರ ಪತ್ರಿಕೆ
0

ತುಮಕೂರು: ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ಕಾಶಪುರ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ದಲಿತ ಯುವಕ ಸಿಂಹಾದ್ರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಪಿಐ(ಎಂ) ತುಮಕೂರು ಜಿಲ್ಲಾ ಸಮಿತಿ ಹಾಗೂ ಸಿಐಟಿಯು (CITU), ಪಿಯುಸಿಎಲ್ (PUCL) ಜಂಟಿ ಸಮಿತಿಯ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಘಟನೆಯಿಂದ ದುಃಖಿತರಾಗಿರುವ ಕುಟುಂಬದ ಸದಸ್ಯರು ಹಾಗೂ ಗ್ರಾಮದ ಸಮಾಜದ ಬಂಧುಗಳನ್ನು ಭೇಟಿ ಮಾಡಿ ಮಾಹಿತಿ ಪಡೆದ ನಿಯೋಗವು, ಸರ್ಕಾರದ ಮುಂದೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.

ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಉಂಟಾದ ಪೈಪೋಟಿ ಮತ್ತು ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದ್ದು, ಘಟನೆಯ ಹಿಂದಿನ ಪೂರ್ವಯೋಜನೆ ಅಥವಾ ಇತರ ಯಾವುದೇ ಕಾರಣಗಳ ಬಗ್ಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ನಿಯೋಗ ಒತ್ತಾಯಿಸಿದೆ. ಜಾತಿ, ಧರ್ಮ ಅಥವಾ ಯಾವುದೇ ಪ್ರಭಾವಕ್ಕೆ ಒಳಗಾಗದೆ ಕಾನೂನು ಉಲ್ಲಂಘಿಸಿದ ತಪ್ಪಿತಸ್ಥ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಒಬ್ಬರ ತಪ್ಪಿಗೆ ಇಡೀ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಆಗ್ರಹಿಸಲಾಗಿದೆ. ಗ್ರಾಮದಲ್ಲಿ ಭೀತಿ ಮತ್ತು ಆತಂಕವನ್ನು ನಿವಾರಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಎಲ್ಲಾ ಸಮುದಾಯಗಳ ಮುಖಂಡರು, ಯುವಕರು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡು ಶಾಂತಿ ಮತ್ತು ಸೌಹಾರ್ದತಾ ಸಭೆ ನಡೆಸಬೇಕು.

ಸಿಂಹಾದ್ರಿ ಕುಟುಂಬದ ಏಕೈಕ ಆಧಾರವಾಗಿದ್ದ ಮಗನನ್ನು ಕಳೆದುಕೊಂಡಿರುವ ತಾಯಿಯ ಪರಿಸ್ಥಿತಿ ಅತ್ಯಂತ ಸಂಕಷ್ಟದಲ್ಲಿದ್ದು, ವಾಸದ ವ್ಯವಸ್ಥೆಯಿಲ್ಲದ ಈ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಮನೆ/ವಸತಿ, ಪರಿಹಾರ, ಜೀವನೋಪಾಯದ ನೆರವು ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸಬೇಕು. ಇದು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣವಾಗಿರುವುದರಿಂದ, ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ-1989ರ ಅಡಿಯಲ್ಲಿ ಸಿಗಬೇಕಾದ ಪರಿಹಾರ, ಪುನರ್ವಸತಿ ಮತ್ತು ಕಾನೂನು ನೆರವನ್ನು ತ್ವರಿತವಾಗಿ ಒದಗಿಸಬೇಕೆಂದು ನಿಯೋಗವು ಆಗ್ರಹಿಸಿದೆ.

ಈ ನಿಯೋಗದಲ್ಲಿ ಸಿಪಿಎಂ ತುಮಕೂರು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ, ಪಿಯುಸಿಎಲ್ ಜಿಲ್ಲಾ ಅಧ್ಯಕ್ಷರಾದ ಪ್ರೊ. ಕೆ. ದೊರೆರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಉಮೇಶ್, ಸಿಐಟಿಯು ಜಿಲ್ಲಾ ಮುಖಂಡರಾದ ಎ. ಲೋಕೇಶ್ ಹಾಗೂ ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ಜೂನಿ ಭಾಗವಹಿಸಿದ್ದರು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ, ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿಯೋಗವು ಬಲವಾಗಿ ಒತ್ತಾಯಿಸಿದೆ.

ವರದಿ: ಮಂಜುಸ್ವಾಮಿ ಎಂ.ಎನ್.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

The post ತುಮಕೂರು: ಗಣೇಶ ವಿಸರ್ಜನೆ ವೇಳೆ ಸಿಂಹಾದ್ರಿ ಹತ್ಯೆ – ಸಂತ್ರಸ್ತ ಕುಟುಂಬಕ್ಕೆ ಸಿಪಿಐ(ಎಂ), ಸಿಐಟಿಯು ಹಾಗೂ ಪಿಯುಸಿಎಲ್ ನಿಯೋಗದಿಂದ ಸಾಂತ್ವನ appeared first on nammatumakuru.



from nammatumakuru https://ift.tt/FMznxyE

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*