ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ‘ಟಿಪ್ಸ್’ ನೀಡುವುದರಲ್ಲಿ ತಪ್ಪಿಲ್ಲ: ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ

ಭಾಸ್ಕರ ಪತ್ರಿಕೆ
0

ಸಕಲೇಶಪುರ: ಸರ್ಕಾರಿ ಅಧಿಕಾರಿಗಳು ಸಕಾಲದಲ್ಲಿ ಕೆಲಸ ಮಾಡಿಕೊಟ್ಟರೆ ಸಾರ್ವಜನಿಕರು ಖುಷಿಯಿಂದ ‘ಟಿಪ್ಸ್’ ಅಥವಾ ‘ಗೌರವಧನ’ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಕಲೇಶಪುರದಲ್ಲಿ ನಡೆದ ‘ಪ್ರಜಾಸೇವಾ ಆಂದೋಲನ’ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ವೇಳೆ ಸಚಿವರು ಈ ಹೇಳಿಕೆ ನೀಡುತ್ತಿದ್ದಂತೆ ಸಭೆಯಲ್ಲಿದ್ದ ಜನರು ಮತ್ತು ಯುವಕರು ಮುಗಿಬಿದ್ದು ವಿರೋಧ ವ್ಯಕ್ತಪಡಿಸಿದರು.

ಭೂಮಿಗೆ ಸಂಬಂಧಿಸಿದ ಸಮಸ್ಯೆಯನ್ನು ಹೊತ್ತು ಆಲೂರು ತಾಲ್ಲೂಕಿನಿಂದ ಬಂದಿದ್ದ ಪುನೀತ್ ಎಂಬ ರೈತ ಹಾಗೂ ಇಂದಿನ ಯುವಕರು ಸಚಿವರ ಹೇಳಿಕೆಯನ್ನು ವೇದಿಕೆಯ ಮುಂದೆಯೇ ತೀವ್ರವಾಗಿ ಖಂಡಿಸಿದರು. “ಅಧಿಕಾರಿಗಳಿಗೆ ಸರ್ಕಾರದಿಂದ ಈಗಾಗಲೇ ಸಂಬಳ ನೀಡಲಾಗುತ್ತಿದೆ, ಹೀಗಿರುವಾಗ ಸಾರ್ವಜನಿಕರು ಯಾಕೆ ಟಿಪ್ಸ್ ಕೊಡಬೇಕು? ಇದು ಲಂಚಕ್ಕೆ ಪ್ರಚೋದನೆ ನೀಡಿದಂತಲ್ಲವೇ?” ಎಂದು ಸಚಿವರನ್ನು ನೇರವಾಗಿ ಪ್ರಶ್ನಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿ ಗದ್ದಲ ತಾರಕಕ್ಕೇರಿತು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸಚಿವ ಶಿವಲಿಂಗೇಗೌಡರು ತಕ್ಷಣವೇ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು. “ಅಧಿಕಾರಿಗಳು ಬಲವಂತವಾಗಿ ಹಣ ವಸೂಲಿ ಮಾಡಬಾರದು, ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಗೌರವ ಸಲ್ಲಿಸಬೇಕು ಎಂಬ ಅರ್ಥದಲ್ಲಿ ನಾನು ಹೇಳಿದ್ದೇನೆ ಹೊರತು, ಲಂಚ ನೀಡುವುದನ್ನು ಪ್ರೋತ್ಸಾಹಿಸಿಲ್ಲ” ಎಂದು ಸ್ಪಷ್ಟನೆ ನೀಡಿದರು.

ವಿವಾದ ತಾರಕಕ್ಕೇರುತ್ತಿದ್ದಂತೆ ಮಧ್ಯಪ್ರವೇಶಿಸಿದ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಪ್ರತಿಭಟನಾ ನಿರತ ಯುವಕರನ್ನು ಸಮಾಧಾನಪಡಿಸಿದರು. “ಸಚಿವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾವುದೇ ಸರ್ಕಾರಿ ಅಧಿಕಾರಿಯು ಕೆಲಸ ಮಾಡಲು ಸಾರ್ವಜನಿಕರಿಂದ ಲಂಚ ಅಥವಾ ಹಣಕ್ಕೆ ಬೇಡಿಕೆಯಿಟ್ಟರೆ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಭರವಸೆ ನೀಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

 

The post ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ‘ಟಿಪ್ಸ್’ ನೀಡುವುದರಲ್ಲಿ ತಪ್ಪಿಲ್ಲ: ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ appeared first on Mahanayaka.



from Mahanayaka https://ift.tt/SJ9L8dt

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*