ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಆವರಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಸ್ಫೋಟ ಮತ್ತು ಬೆಂಕಿ ಅವಘಡದಿಂದ ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಬೆಚ್ಚಿಬಿದ್ದಿವೆ. ಈ ದುರ್ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು, ಓರ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಇಂದು ಮಧ್ಯಾಹ್ನ 12:30ರ ಹೊತ್ತಿಗೆ ಎಂಆರ್ ಪಿಎಲ್ ನ 3ನೇ ಹಂತದ ಸಿಎಸ್ ಟಿ (CST) ಪ್ಲಾಂಟ್‌ನಲ್ಲಿ ಅನಿರೀಕ್ಷಿತವಾಗಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತಕ್ಷಣವೇ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡು, ಆಕಾಶದೆತ್ತರಕ್ಕೆ ದಟ್ಟ ಕಪ್ಪು ಹೊಗೆ ಆವರಿಸಿಕೊಂಡಿತು. ಕಾರ್ಖಾನೆಯ ಆವರಣದಲ್ಲಿ ಆವರಿಸಿದ ದಟ್ಟ ಹೊಗೆಯನ್ನು ನೋಡಿ ಹತ್ತಿರದ ನಿವಾಸಿಗಳು ತೀವ್ರ ಆತಂಕಕ್ಕೊಳಗಾದರು.
ಮಹಿಳಾ ಸಿಬ್ಬಂದಿ ನಿರ್ವಹಿಸುತ್ತಿದ್ದ ಘಟಕದಲ್ಲಿ ಅವಘಡ!
ವಿಶೇಷವೆಂದರೆ, ಈ ಬಾರಿಯ ಸ್ಫೋಟ ಸಂಭವಿಸಿರುವ ಘಟಕವನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳೇ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಘಟಕದಲ್ಲಿದ್ದ ಸಿಬ್ಬಂದಿಗಳು ಮತ್ತು ಕಾರ್ಮಿಕರ ಸುರಕ್ಷತೆಯ ಬಗ್ಗೆ ತಕ್ಷಣವೇ ಕಾಳಜಿ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಗಳು ಚುರುಕುಗೊಂಡಿವೆ.
8 ಮಂದಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ:
ವರದಿಗಳ ಪ್ರಕಾರ, ಈ ಭೀಕರ ಅವಘಡದಲ್ಲಿ ಒಟ್ಟು 8 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇವರಲ್ಲಿ ಓರ್ವ ಕಾರ್ಮಿಕರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ನಡುಗಿದ ಜೋಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು!
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಅದರ ಪ್ರಚಂಡ ಶಬ್ದ ಹಾಗೂ ಕಂಪನಕ್ಕೆ ಜೋಕಟ್ಟೆ ಪಂಚಾಯತ್ ಕಟ್ಟಡ ಹಾಗೂ ಸುತ್ತಮುತ್ತಲಿನ ವಸತಿ ಪ್ರದೇಶಗಳು ನಡುಗಿಹೋಗಿವೆ. ಎಂಆರ್ ಪಿಎಲ್ ನಿಂದ ಸುಮಾರು 1 ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದ ಹಲವು ಮನೆಗಳ ಬಾಗಿಲುಗಳು ಮತ್ತು ಕಿಟಕಿಗಳ ಗಾಜುಗಳು ಸ್ಫೋಟದ ರಭಸಕ್ಕೆ ಪುಡಿಯಾಗಿವೆ. ಕಾರ್ಖಾನೆಯಿಂದ ಹೊರಹೊಮ್ಮಿದ ಆ ಶಬ್ದವು ದೂರದ ಮಂಗಳೂರಿನ ಲೇಡಿಹಿಲ್ ತನಕವೂ ಸ್ಪಷ್ಟವಾಗಿ ಕೇಳಿಸಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ
ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ನವ ಮಂಗಳೂರು ಬಂದರು (NMPT), ಕದ್ರಿ ಮತ್ತು ಪಾಂಡೇಶ್ವರದ ಅಗ್ನಿಶಾಮಕ ದಳದ ವಾಹನಗಳು ಹಾಗೂ ಸಿಬ್ಬಂದಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು. ಸತತವಾಗಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನ ಮುಂದುವರಿದಿದೆ.
ಎಂಆರ್ ಪಿಎಲ್ ನ ಈ ಬೃಹತ್ ಘಟಕದಲ್ಲಿ ಈ ರೀತಿಯ ಭಾರೀ ಸ್ಫೋಟಕ್ಕೆ ನಿಖರವಾದ ಕಾರಣವೇನು ಎಂಬುದು ಇನ್ನು ಅಧಿಕೃತವಾಗಿ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
The post ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ: 8 ಮಂದಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ appeared first on Mahanayaka.
from Mahanayaka https://ift.tt/rVSbJ2B
