ತುಮಕೂರು ನಗರದಲ್ಲಿ ಅ.12ರವರೆಗೆ ನಡೆಯುವ ದಸರಾದಲ್ಲಿ ಅ.11ರಂದು ನಟ ಶಿವರಾಜ್ ಕುಮಾರ್ ಆಗಮಿಸಲಿದ್ದಾರೆ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ದಸರಾ ಯಶಸ್ವಿಯಾಗಿ ನಡೆಯುತ್ತಲಿದೆ –ತಹಶೀಲ್ದಾರ್ ಆರತಿ.ಬಿ.

ಭಾಸ್ಕರ ಪತ್ರಿಕೆ
0

ಗುಬ್ಬಿ:- ತುಮಕೂರು ಜಿಲ್ಲೆಯಲ್ಲಿ ಮೈಸೂರು ದಸರಾ ಮಹೋತ್ಸವದ ರೀತಿಯಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಅ.03 ರಿಂದ ಅ.12 ರವರೆಗೂ ತುಮಕೂರು ದಸರಾ-2024 ಮಹೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಚಾಲನೆ ನೀಡಿದ್ದಾರೆ ಎಂದು ತಹಶೀಲ್ದಾರ್ ಆರತಿ ಬಿ. ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾಲೂಕು ಕಚೇರಿಯ ಕೋರ್ಟ್ ಹಾಲ್ ನಲ್ಲಿ ದಸರಾ ಮಹೋತ್ಸವ ಸಮಿತಿ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ದಸರಾ ಮಹೋತ್ಸವವನ್ನು ವೈಭವದಿಂದ ಆಯೋಜಿಸಿದ್ದು, ಸದರಿ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಅವರು ಅ.11 ರಂದು ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದು, ಧಾರ್ಮಿಕ ಉತ್ಸವ, ನವರಾತ್ರಿ ಉತ್ಸವ, ದುರ್ಗಾ ಪೂಜೆ, ಧ್ವಜಾರೋಹಣ, ಪ್ರತಿನಿತ್ಯ ವಿಶೇಷ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದು, ಮಹಿಳಾ ಮತ್ತು ಮಕ್ಕಳ ದಸರಾ, ಯುವ ಸಂಭ್ರಮ, ಆಹಾರ ಮೇಳ ಕಾರ್ಯಕ್ರಮಗಳು ಆರಂಭವಾಗಿದ್ದು, ಅ.11 ರಂದು ಬೆಳಗ್ಗೆ ಕ್ರೀಡಾ ದಸರಾ ಉತ್ಸವ, ನಾಡ ಕುಸ್ತಿ, ಆಹಾರ ಮೇಳ, ವಸ್ತು ಪ್ರದರ್ಶನ, ಹಾಗೂ ಅಂದು ಸಂಜೆ ತುಮಕೂರು ಸಾಂಸ್ಕೃತಿಕ ವೈಭವ 2024 ದಲ್ಲಿ ಗಾಯಕ ಗುರುಕಿರಣ್ ಹಾಗೂ ಕಂಬದ ರಂಗಯ್ಯ ತಂಡದಿಂದ ಸಂಗೀತ ರಸ ಸಂಜೆ, ಹಾಗೂ ಆಕರ್ಷಕ ಲೇಸರ್ ಶೋ ಎಚ್ ಎ ಎಲ್ ವತಿಯಿಂದ ಏರ್ ಶೋ ಪ್ರದರ್ಶನ ವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ತಾಲೂಕಿನಲ್ಲಿ ತುಮಕೂರು ದಸರಾ 2024 ಕುರಿತ ಪ್ರಚಾರ ಕಾರ್ಯಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಗ್ರಾ ಪಂ, ಪ.ಪಂ ತಾಲೂಕು ಮಟ್ಟದ ಅಧಿಕಾರಿಗಳ ಮೂಲಕ ಜಿಲ್ಲಾಡಳಿತ ಒದಗಿಸಿ ಕೊಟ್ಟಿರುವ ಪೋಸ್ಟರ್, ಬ್ಯಾನರ್, ಗಣ್ಯರಿಗೆ ಆಹ್ವಾನ ಪತ್ರ, ಕರಪತ್ರವನ್ನು ಹಂಚಿಕೆ ಮಾಡಲಾಗಿದ್ದು, ಇನ್ನಷ್ಟು ಆಹ್ವಾನ ಪತ್ರಿಕೆ, ಕತ್ರಪತ್ರ ಬಂದ ತಕ್ಷಣ ತಲುಪಿಸುವ ಕಾರ್ಯ ಮಾಡಲಾಗುವುದು. ವಿವಿಧ ರೀತಿಯ ಕಾರ್ಯಕ್ರಮಗಳ ಕುರಿತು ವಿಡಿಯೋ ಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ದಸರಾ ಆಕರ್ಷಣೀಯ ರೀತಿಯಲ್ಲಿ ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅ.12 ರಂದು ವಿಜಯ ದಶಮಿಯಂದು ಬೆಳಗ್ಗೆ ಧಾರ್ಮಿಕ ಪೂಜಾ ಕೈಂಕರ್ಯ, ಕವಿ ಗೋಷ್ಠಿ, ನವ ದುರ್ಗೆಯರ ಇತಿಹಾಸ ಕುರಿತ ನೃತ್ಯ ರೂಪಕ, ಸಂಜೆ ಗಾಯಕ ವಿಜಯ ಪ್ರಕಾಶ್ ಹಾಗೂ ಅವರ ತಂಡದಿಂದ ಸಂಗೀತ ರಸ ಸಂಜೆ, ಡ್ರೋನ್ ಮೂಲಕ ಸಾಂಸ್ಕೃತಿಕ ತುಮಕೂರು ದಸರಾ 2024 ಶೋ, ಟೌನ್ ಹಾಲ್ ವೃತ್ತದಿಂದ ಅಶೋಕ ರಸ್ತೆ, ಡಿಸಿ ಕಚೇರಿ ಮೂಲಕ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾರೋಪ ಸಮಾರಂಭ ಹಾಗೂ ವಿಜಯ ದಶಮಿ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಸಾರ್ವಜನಿಕರು, ಸಂಘ ಸಂಸ್ಥೆಗಳು, ಈ ಕಾರ್ಯಕ್ರಮದಲ್ಲಿ ಭಾಗಿ ಆಗುವ ಮುಖೇನ ಕಾರ್ಯಕ್ರಮದ ಯಶಸ್ವಿಗೆ ಸಹಕಾರಿಯಾಗುವಂತೆ ಪತ್ರಿಕಾ ಗೋಷ್ಠಿ ಮೂಲಕ ಮನವಿ ಮಾಡಿದರು.

ದಸರಾ ಕಾರ್ಯಕ್ರಮಕ್ಕೆ ಮೆರಗು ತರುವ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾ, ಫೆಸ್ ಬುಕ್, ಇನ್ ಸ್ಟ್ರೋಗ್ರಾಂ ಗಳಲ್ಲಿ ಕಾರ್ಯಕ್ರಮದ ಚಲಕ್ ಅನ್ನು ಅಪ್ಲೋಡ್ ಮಾಡುತ್ತಿದ್ದು, ಇನ್ನಷ್ಟು ವಿಭಿನ್ನ ರೀತಿಯಲ್ಲಿ ಸಾರ್ವಜನಿಕರಿಗೆ ಆಕರ್ಷಣೀಯ ರೀತಿಯಲ್ಲಿ ಮೆರಗು ತರುವ ನಿಟ್ಟಿನಲ್ಲಿ ತಾಲೂಕುಗಳಿಂದ ಸಹ ಆಗಬೇಕೆಂಬ ಅಭಿಲಾಷೆ ಜಿಲ್ಲಾಡಳಿತದ್ದು ಆಗಿದೆ. ಹಾಗಾಗಿ ಸಾರ್ವಜನಿಕರು, ಮಹಿಳೆಯರು, ಸಂಘ ಸಂಸ್ಥೆಗಳು, ಕಲಾವಿದರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸುದ್ದಿಗೋಷ್ಠಿ ಮೂಲಕ ಮನವಿ ಮಾಡಿದರು.

ಈ ಸುದ್ದಿಗೋಷ್ಠಿಯಲ್ಲಿ ಪ.ಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ತಾ.ಪಂ ಇಓ ಶಿವಪ್ರಕಾಶ್, ಮಹೇಂದ್ರ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*