ನಾಗಪುರ: ವಿಜಯದಶಮಿಯ ದಿನವಾದ ಶನಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರನೇ ವರ್ಷಕ್ಕೆ ಕಾಲಿಟ್ಟಿದೆ. 1925ರಲ್ಲಿ ವಿಜಯದಶಮಿ ದಿನದಂದು ಮಹಾರಾಷ್ಟ್ರದ ನಾಗಪುರದ ಮಹಲ್- ಮೊಹಿತೇವಾಡ ದಲ್ಲಿದ್ದ ಡಾ.ಕೇಶವ ಬಲಿರಾಂ ಹೆಡಗೇವಾರ್ ಅವರ ಮನೆಯಲ್ಲಿ ಸ್ಥಾಪನೆಯಾದ ಆರೆಸ್ಸೆಸ್ ಭಾರತೀಯರಲ್ಲಿ ರಾಷ್ಟ್ರಪ್ರಜ್ಞೆ ಮತ್ತು ರಾಷ್ಟ್ರಭಾವ ಜಾಗೃತಗೊಳಿಸುವ ಕಾರ್ಯ ಮಾಡುತ್ತಿದೆ. ಸ್ವದೇಶಿ ಜೀವನ ದೃಷ್ಟಿಯನ್ನು ಬೆಳೆಸುವ ಕೆಲಸದಲ್ಲಿ ನಿರತವಾಗಿದೆ. ಮೊದಲು ವಾರದಲ್ಲಿ 2-3 ದಿನ ದೈಹಿಕ-ಬೌದ್ಧಿಕ ಚಟುವಟಿಕೆ ಪ್ರಾರಂಭಿಸಿದ ಆರೆಸ್ಸೆಸ್, 1926ರ ಮೇ 28ರಿಂದ ದೈನಂದಿನ 'ಶಾಖೆ' ಶುರು ಮಾಡಿತು.
ಸಂಘದ ವ್ಯಾಪ್ತಿ ವಿಸ್ತಾರ: ದೇಶಾದ್ಯಂತ ಆರೆಸ್ಸೆಸ್ನ 73,117 ದೈನಿಕ ಶಾಖೆಗಳು, 27,717 ವಾರಕ್ಕೊಮ್ಮೆ ಸೇರುವ ಶಾಖೆಗಳು, 27,720 ಮಂಡಲಗಳು, 10,567 ಸಂಘ ಮಂಡಲಿಗಳು, 6,597 ಖಂಡಗಳಿವೆ. ಜಗತ್ತಿನ 53 ದೇಶಗಳಲ್ಲಿ ಇದರ ಶಾಖೆಗಳು ಹಿಂದು ಸ್ವಯಂಸೇವಕ ಸಂಘದ ಹೆಸರಿನಲ್ಲಿ ನಡೆಯುತ್ತಿವೆ. ಪರಿವಾರದ ಸಂಘಟನೆಗಳು: ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಭಾರತೀಯ ಕಿಸಾನ್ ಸಂಘ, ವನವಾಸಿ ಕಲ್ಯಾಣ, ಭಾರತೀಯ ಮಜ್ದೂರ್ ಸಂಘ, ವಿಶ್ವ ಹಿಂದೂ ಪರಿಷತ್ ಹೀಗೆ ಹತ್ತಾರು ಸಂಘಟನೆಗಳು ಆರೆಸ್ಸೆಸ್ ವಿಚಾರಧಾರೆಯಿಂದ ಜನ್ಮ ತಳೆದಿದ್ದು, ಅವುಗಳೆಲ್ಲವನ್ನೂ ಸಂಘ ಪರಿವಾರ ಎಂದು ಕರೆಯಲಾಗುತ್ತದೆ.
ಬಾಂಗ್ಲಾ-ಪಾಕ್ ಸ್ನೇಹ ಭಾರತಕ್ಕೆ ಮಾರಕ: ಕಳೆದ ಕೆಲ ವರ್ಷಗಳಲ್ಲಿ ಭಾರತದ ಬಗೆಗಿಗ ಜಾಗತಿಕ ವಿಶ್ವಾಸಾರ್ಹತೆ ಸುಧಾರಿಸಿದ್ದು, ದೇಶ ವಿಶ್ವದಲ್ಲಿ ಬಲಿಷ್ಠವಾಗಿರುವ ಜತೆಗೆ ಹೆಚ್ಚು ಗೌರವಾನ್ವಿತವಾಗಿದೆ. ಆದರೆ ಕೆಲ ಕೆಟ್ಟ ಪಿತೂರಿಗಳು ದೇಶದ ಸಂಕಲ್ಪವನ್ನು ಪರೀಕ್ಷಿಸುತ್ತಿವೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.ಆರೆಸ್ಸೆಸ್ನ ವಾರ್ಷಿಕ ವಿಜಯದಶಮಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಬಾಂಗ್ಲಾದೇಶಕ್ಕೆ ಭಾರತದಿಂದ ಬೆದರಿಕೆ ಇರುವುದರಿಂದ ಬಾಂಗ್ಲಾದೇಶೀಯರು ಪಾಕಿಸ್ತಾನ ದೊಂದಿಗೆ ಕೈಜೋಡಿಸಬೇಕು ಎಂಬ ನಿರೂಪಣೆಯನ್ನು ಹರಡಲಾಗುತ್ತಿದೆ. ಅವೆರಡರ ಸ್ನೇಹ ಭಾರತಕ್ಕೆ ಮಾರಕ. ಸನ್ನಿವೇಶವು ಅನುಕೂಲಕರವಾಗಿರಲಿ ಇಲ್ಲದಿರಲಿ, ಶುಭ ಮತ್ತು ಸದಾಚಾರದ ವಿಜಯಕ್ಕೆ ವೈಯಕ್ತಿಕ ಮತ್ತು ರಾಷ್ಟ್ರೀಯತೆಯ ದೃಢತೆಯೇ ಶಕ್ತಿಯ ಅಡಿಪಾಯವಾಗುತ್ತದೆ ಎಂದರು.
ಬಾಂಗ್ಲಾದೇಶದಲ್ಲಿ ದಬ್ಬಾಳಿಕೆಯ ಮೂಲಭೂತವಾದಿ ಸ್ವಭಾವವಿದೆ. ಹಿಂದುಗಳೂ ಸೇರಿ ಅಲ್ಪಸಂಖ್ಯಾತರ ತಲೆಯ ಮೇಲೆ ಅಪಾಯದ ತೂಗುಗತ್ತಿ ಇದೆ. ಹಿಂದುಗಳು ಈಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಅಸಂಘಟಿತ ಮತ್ತು ದುರ್ಬಲವಾಗಿರುವುದು ದುಷ್ಟರಿಂದ ದೌರ್ಜನ್ಯಆಹ್ವಾನಿಸಿದಂತೆ. ಹಿಂದುಗಳು ಒಗ್ಗಟ್ಟಾಗಿರಬೇಕು ಎಂದು ಹೇಳಿದರು. ರಾಷ್ಟ್ರೀಯ ಹಿತಾಸಕ್ತಿ ಬದಿಗಿರಿಸಿ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಒಂದು ಪಕ್ಷದ ಬೆಂಬಲಕ್ಕೆ ನಿಲ್ಲುವುದು ಮತ್ತು ಪರ್ಯಾಯ ರಾಜಕೀಯದ ಹೆಸರಿನಲ್ಲಿ ತಮ್ಮ ವಿನಾಶಕಾರಿ ಅಜೆಂಡಾ ಮುನ್ನಡೆಸುವುದು ಅವರ ಕಾರ್ಯತಂತ್ರವಾಗಿದೆ. ಡೀಪ್ ಸ್ಟೇಟ್, ವೋಕೀಸಂ, ಮತ್ತು ಸಾಂಸ್ಕೃತಿಕ ಮಾರ್ಕ್ಸ್ ವಾದಿಗಳು ಎಲ್ಲಾ ಸಾಂಸ್ಕೃತಿಕ ಸಂಪ್ರದಾಯಗಳ ಘೊಷಿತ ಶತ್ರುಗಳು. ಅವರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದರು.
ಒಟಿಟಿ ನಿಯಂತ್ರಿಸಿ: ದೇಶದಲ್ಲಿ ನೈತಿಕ ಭ್ರಷ್ಟಾಚಾರ ಹೆಚ್ಚುತ್ತಿರುವುದಕ್ಕೆ ಒಟಿಟಿ ವೇದಿಕೆಗಳು ಕಾರಣ, ಅವುಗಳನ್ನು ಕೇಂದ್ರ ಸರ್ಕಾರ ನಿಯಂತ್ರಿಸಬೇಕು ಎಂದು ಭಾಗವತ್ ಆಗ್ರಹಿಸಿದರು. 'ಒಟಿಟಿಗಳಲ್ಲಿ ಎಂಥದ್ದನ್ನೆಲ್ಲ ತೋರಿಸಲಾಗುತ್ತಿದೆ ಎಂದರೆ ಅದರ ಬಗ್ಗೆ ಮಾತನಾಡುವುದೂ ಅಸಹ್ಯ ಹುಟ್ಟಿಸುತ್ತದೆ. ಅವುಗಳಿಂದ ಯುವಪೀಳಿಗೆ ದಾರಿ ತಪ್ಪುತ್ತಿದೆ' ಎಂದರು.
ಸಾಂಸ್ಕೃತಿಕ ಅವನತಿಗೆ ಸಾಕ್ಷಿ: ಕೋಲ್ಕತದ ಆರ್ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯೆಯ ರೇಪ್-ಕೊಲೆ ಪ್ರಕರಣ ಮುಚ್ಚಿಹಾಕಲು ಕೆಲವರು (ಟಿಎಂಸಿ ನೇತೃತ್ವದ ಸರ್ಕಾರ) ಪ್ರಯತ್ನಿಸುತ್ತಿರುವುದು ಖಂಡನೀಯ. ಇಂತಹ ಘಟನೆಗಳು ದೇಶದಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಅವನತಿ ಮತ್ತು ಭ್ರಷ್ಟಾಚಾರಕ್ಕೆ ನಿದರ್ಶನ ಎಂದ ಭಾಗವತ್, 'ದ್ರೌಪದಿಯ ಸೀರೆ ಮುಟ್ಟಿದ್ದರಿಂದ ಮಹಾಭಾರತವೇ ನಡೆಯಿತು. ಸೀತೆಯ ಅಪಹರಣ ಆಗಿದ್ದಕ್ಕೆ ರಾಮಾಯಣ ಸಂಭವಿಸಿತು' ಎಂದು ಪೌರಾಣಿಕ ಪ್ರಸಂಗಗಳನ್ನು ಸ್ಮರಿಸಿಕೊಂಡರು.
ರತ್ನಗಿರಿಯಲ್ಲಿ ಗಲಾಟೆ: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಶನಿವಾರ ಆರೆಸ್ಸೆಸ್ನ ವಿಜಯದಶಮಿ ಮೆರವಣಿಗೆ ಹೋಗುತ್ತಿರುವಾಗ ಅಲ್ಪಸಂಖ್ಯಾತ ಸಮುದಾಯದ ಕೆಲವರು ಹಿಂದುವಿರೋಧಿ ಘೊಷಣೆ ಕೂಗಿ ಗದ್ದಲ ಎಬ್ಬಿಸಿದ್ದಾರೆ. ಇದರಿಂದ ಕೆಲ ಕಾಲ ತ್ವೇಷಮಯ ಪರಿಸ್ಥಿತಿ ನೆಲೆಸಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಹಿಂದು ಕಾರ್ಯಕರ್ತರು ಠಾಣೆ ಎದುರು ಪ್ರತಿಭಟನೆ ನಡೆಸಿದರು. ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಯಾರನ್ನೂ ಬಂಧಿಸಿಲ್ಲ.
ಭಾರತ ಮಾತೆಯ ಸೇವೆಗೆ ಸದಾ ಕಟಿಬದ್ಧವಾಗಿರುವ ಆರೆಸ್ಸೆಸ್ಗೆ ಅಭಿನಂದನೆಗಳು. ಅದು ಎಲ್ಲ ಪೀಳಿಗೆಯ ಜನರಿಗೂ ಸ್ಪೂರ್ತಿಯಾಗಿದೆ. ವಿಕಸಿತ ಭಾರತದ ಗುರಿ ಸಾಧಿಸುವ ದಿಸೆಯಲ್ಲಿ ಹೊಸ ಶಕ್ತಿಯನ್ನು ನೀಡುತ್ತದೆ.

