ತಿಪಟೂರು: ಕೆ.ಎಸ್.ಆರ್ ಬೆಂಗಳೂರು ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್ಪ್ರೆಸ್, ರೈಲುಗಳಿಗೆ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಹಸಿರು ನಿಶಾನೆಯನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣನವರು ತಿಪಟೂರಿನಲ್ಲಿ ಚಾಲನೆ ನೀಡಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು-ಶಿವಮೊಗ್ಗ ಹಾಗೂ ಬೆಂಗಳೂರು-ಹುಬ್ಬಳ್ಳಿ ಮಾರ್ಗದ ಜನಶತಾಬ್ದ ರೈಲಿಗೆ ಹೆಚ್ಚುವರಿ ನಿಲುಗಡೆಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ ತುಮಕೂರು ಕೂಡ ಅದರಲ್ಲಿ ಸೇರಿದ್ದು.ತುಮಕೂರು-ಶಿವಮೊಗ್ಗ ರಾ.ಹೆ. ಅಡೆತಡೆಗಳನ್ನು ನಿವಾರಿಸಿ ಇನ್ನು 6 ತಿಂಗಳಲ್ಲಿ ರಾಷ್ಟ್ರಕ್ಕೆ ಸಮರ್ಪಣೆ ಮಾಡುತ್ತೇವೆಂದರು.
ತುಮಕೂರು-ರಾಯದುರ್ಗ, ತುಮಕೂರು- ದಾವಣಗೆರೆ ರೈಲ್ವೆಗೂ ಚಾಲನೆ ನೀಡಿದ್ದು ಆದಷ್ಟುಬೇಗ ಕೆಲಸ ಮುಗಿಯಲಿವೆ ಎಂದು ಹೇಳಿದ ಸಚಿವರು, ಅರಳುಗುಪ್ಪೆಯಲ್ಲಿ ಚಿಕ್ಕಮಗಳೂರು ರೈಲು ನಿಲುಗಡೆಗೆ ತಿಂಗಳಲ್ಲಿ ಹಸಿರು ನಿಶಾನೆ ತೋರುವುದಾಗಿ ಸಚಿವರು ಭರವಸೆ ನೀಡಿದರು. ಇದೇ ವೇಳೆ ತಿಪಟೂರಿನ ಕೊಡಿ ಸರ್ಕಲ್ ನಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣ- ಕ್ಕೆ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೆ ವೇಳೆ ಮಾತನಾಡಿದ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಈ ಎರಡು ರೈಲು ನಿಲುಗಡೆಗೆ ಅವಕಾಶ ಮಾಡಿಕೊಟ್ಟ ಸೋಮಣ್ಣನವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಂತೆ 24 ಗಂಟೆ ಕೆಲಸ ನಿರ್ವಹಿಸುವ ಪ್ರವೃತ್ತಿ ಬೆಳೆಸಿಕೊಂಡಿರುವ ಸೋಮಣ್ಣನವರು ಶಿವಮೊಗ್ಗ ದಿಂದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಇನ್ನು ಆರು ತಿಂಗಳಲ್ಲಿ ಸರಿಪಡಿಸುತ್ತೇವೆ ಎಂದರು. ಕರ್ನಾಟಕ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಆದಕಾರಣ ಕೇಂದ್ರ ಸರ್ಕಾರದಿಂದ 500 ಕೋಟಿ ರೂಗಳನ್ನು ರಸ್ತೆ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿಸಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಈ ವೇಳೆ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಮುಖಂಡರಾದ ಲೋಕೇಶ್ವರ್, ಕೆ.ಟಿ.ಶಾಂತಕುಮಾರ್, ರೈಲ್ವೆ ಮೈಸೂರು ವಿಭಾಗದ ಡಿಆರ್‌ಎಂ ಶಿಲ್ಪಿ ಅಗರ್‌ವಾಲ್, ಹಿರಿಯ ವಾಣಿಜ್ಯ ವ್ಯವಸ್ಥಾಪಕ ಲೋಹಿತಾಶ್ವರ, ಎಸಿ ಸಪ್ತಶ್ರೀ ತಹಶೀಲ್ದಾರ್ ಪವನ್ ಕುಮಾರ್, ಹಾಜರಿದ್ದರು.
