ತಿಪಟೂರು: ನಗರದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಶನಿವಾರ ಬಯಲುಸೀಮೆ ಸಾಮಾಜಿಕ, ಸಾಂಸ್ಕೃತಿಕ ಸಂಘದ 23ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಭಾವಗೀತ ಗಾಯನ, ಸಾಹಿತ್ಯ "ಕಲ್ಪತರು ಪ್ರಶಸ್ತಿ" ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಡಾ. ನಾ.ಸೋಮಶೇಖರ್ ಮಾತನಾಡಿದರು.
ಕನ್ನಡ ನಾಡಿನಲ್ಲಿ ಜನಿಸಿದಂತಹ ಪ್ರತಿಯೊಬ್ಬರು ಕನ್ನಡ ಸಾಹಿತ್ಯ, ಭಾಷೆಯನ್ನು ಉಳಿಸಿ ಬೆಳೆಸುವಂತಹ ಕಾಯಕವನ್ನು ಮಾಡಬೇಕಿದೆ. ದಿನಕಳೆದಂತೆ ಇತರ ಭಾಷೆಗಳ ಮೇಲಿನ ವ್ಯಾಮೋಹ ಹೆಚ್ಚಾದಂತೆಲ್ಲಾ ಕನ್ನಡದ ಬಳಕೆ ಕಡಿಮೆಯಾಗುತ್ತಿರುವುವು ದುಃಖದ ಸಂಗತಿ. ಎರಡು ಸಾವಿರ ವರ್ಷಕ್ಕೂ ಹಳೆಯ ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ಸಂಕೇತವಾಗಿದೆ. ಅದ್ದರಿಂದ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಶೇ.65 ರಷ್ಟು ಇದೆ. ಆದರೆ ಶಾಲೆಯಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುವ, ಮನೆಯಲ್ಲಿ ಕನ್ನಡವನ್ನು ಮಾತನಾಡದೇ ಇರುವಂತಹ ಅದೆಷ್ಟೋ ಕುಟುಂಬಗಳಿವೆ. ಇಂಗ್ಲೀಷ್‍ನ್ನು ಭಾಷೆಯಾಗಿ ಮಾತ್ರ ಕಲಿಸಿ, ಅದನ್ನೇ ಮಾತೃಭಾಷೆಯನ್ನಾಗಿಸಬೇಡಿ. ನಾನು ಇಂಗ್ಲೀಷ್ ಭಾಷೆಯ ವಿರೋಧಿಯಲ್ಲ, ಹೊಟ್ಟೆಪಾಡಿಗೆ ಯಾವ ಭಾಷೆ ಬೇಕಾದರೂ ಬಳಸಿ ಮನೆಗಳಲ್ಲಿ ಕನ್ನಡ ಭಾಷೆ ಸಾವ್ರಭೌಮತೆಯನ್ನು ಮೆರೆಯಬೇಕು ಎಂದರು.
ಸಂಯುಕ್ತ ಕರ್ನಾಟಕ ದಿನಪತ್ರಿಯ ಸಹ ಸಂಪಾದಕ ಕೆ.ವಿ.ಪರಮೇಶ್ ಮಾತನಾಡಿ ಯಾವುದೇ ಒಂದು ಸಂಘಟನೆ ಸ್ಥಾಪನೆಯಾಗಿ ಸತತ 23 ವರ್ಷಗಳಿಂದ ಸಮಾಜಮುಖಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದರೇ ಸಾಮಾನ್ಯದ ಸಂಗತಿಯಲ್ಲ. ಸಂಘಟನೆಗಳ ಪ್ರಾರಂಭವಾದಷ್ಟು ವೇಗವಾಗಿ ಹಣ್ಮರೆಯಾಗುವುದನ್ನು ನಾವು ನೋಡಿದ್ದೇವೆ. ಇಂದಿನ ಪೋಷಕರು ತಮ್ಮ ಮಕ್ಕಳು ವೈದ್ಯರು, ಇಂಜಿನಿಯರ್‍ಗಳಾಗಿ ಹೊರಹೊಮ್ಮಲಿ ಎಂಬ ಆಸೆ ಪಡುತ್ತಿದ್ದಾರೆ. ಆದರೆ ವಿದ್ಯಾರ್ಥಿ ದಿಸೆಯಲ್ಲಿ ಅವರಿಗೆ ಇಷ್ಟವಿರುವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಪೋಷಕರು ಅವಕಾಶ ನೀಡುವಂತಹ ಮನಸ್ಥಿತಿಯನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಅನುಕೂಲವಾಗುತ್ತದೆ ಎಂದರು.
ಮಾಜಿ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ಮಾತನಾಡಿ ಕನ್ನಡ ಪರ ಸಂಘಟನೆಗಳು ನಾಡು, ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವಂತಹ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಸಾಹಿತ್ಯ ಕಲ್ಪತರು ಪ್ರಶಸ್ತಿಯನ್ನು ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮ ಖ್ಯಾತಿಯ ಡಾ.ನಾ.ಸೋಮೇಶ್ವರ್‍ರಿಗೆ ನೀಡಿ ಗೌರವಿಸಲಾಯಿತು. ಆಲದಹಳ್ಳಿ ಗ್ರಾಮದ ಚಿತ್ರಕಲಾವಿದ ಎ.ಸಿ.ಹೊನ್ನಪ್ಪರಿಗೆ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ನೂರಿಪ್ಪತೈದು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ತಹಶೀಲ್ದಾರ್ ಪವನ್ ಕುಮಾರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಸುದರ್ಶನ್, ಹಿರಿಯ ಪರ್ತಕರ್ತ ಶಿವರಾಜ್, ಕೇಂದ್ರ ಸಾಹಿತ್ಯ ಪುರಸ್ಕøತ ಮಕ್ಕಳ ಸಾಹಿತಿ ನಾಗರಾಜಶೆಟ್ಟಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮನಮೋಹನ್, ಸಂಘದ ಅಧ್ಯಕ್ಷ ಎಚ್.ಸಿ.ನಾಗರಾಜು, ಪ್ರಧಾನ ಕಾರ್ಯದರ್ಶಿ ಎನ್.ಬಾನು ಪ್ರಶಾಂತ್, ಆರೋಗ್ಯ ವೈದ್ಯಾಧಿಕಾರಿ ರವಿಕುಮಾರ್ ಇದ್ದರು.
ವರದಿ: ಧರಣೇಶ್ ಕುಪ್ಪಾಳು


