ತಿಪಟೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇಂದು ಕೃಷ್ಣಮೂರ್ತಿ ಬಿಳಿಗೆರೆಯವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಮಾನ್ಯ ಶಾಸಕರನ್ನು ಭೇಟಿಯಾಗಿ ರಾಜ್ಯದ ಪ್ರಸ್ತುತ ಸರ್ಕಾರಿ ಶಾಲೆಗಳ ಸ್ಥಿತಿ ಗತಿಗಳ ಸುಧಾರಣೆ ಮತ್ತು ಕನ್ನಡ ಶಾಲೆಗಳ ಉಳಿವಿಗಾಗಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಕ್ಕೊತ್ತಾಯ ಮನವಿಯನ್ನು ನೀಡಲಾಯಿತು. ಕೃಷ್ಣಮೂರ್ತಿ ಬಿಳಿಗೆರೆಯವರು ಮಾತನಾಡಿ ಇಂದು ಸರ್ಕಾರಿ ಶಾಲೆಗಳಿಗೆ ಬಡವರು, ದಲಿತ, ಮತ್ತು ಹಿಂದುಳಿದ ವರ್ಗಗಳ ಮಕ್ಕಳು ದಾಖಲಾಗುತ್ತಿದ್ದು, ಶೈಕ್ಷಣಿಕ ಪ್ರಗತಿ ಅತ್ಯಂತ ಕೆಳಮಟ್ಟದಲ್ಲಿದೆ. ಎಲ್ಲರಿಗೂ ಉತ್ತಮ ಶಿಕ್ಷಣ ನೀಡಬೇಕಾಗಿರುವುದು ಸರ್ಕಾರದ ಹೊಣೆಯಾಗಿದೆ. ಈ ದಿಸೆಯಲ್ಲಿ ಮಾನ್ಯ ಶಾಸಕರು ಕ್ರಮ ಕೈಗೊಳ್ಳಬೇಕೆಂದು ಹೇಳಿ ಕೂಡಲೇ ಖಾಲಿ ಇರುವ ೫೯೦೦೦ ಶಿಕ್ಷಕರ ನೇಮಕಾತಿ ಮಾಡಬೇಕಲ್ಲದೆ, ಶಿಕ್ಷಕರನ್ನು ಕಡ್ಡಾಯವಾಗಿ ಬೋಧನಾ ಕೆಲಸಕ್ಕೆ ಮಾತ್ರ ತೊಡಗಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಉತ್ತರವಾಗಿ ಮಾನ್ಯ ಶಾಸಕರು ಉತ್ತರಿಸುತ್ತಾ. ನಿಮ್ಮಗಳ ಹಕ್ಕೊತ್ತಾಯದ ಬಗ್ಗೆ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿ ಸರ್ಕಾರ ಶಿಕ್ಷಣಕ್ಕೆ ಸಾಕಷ್ಟು ಪ್ರೋತ್ಸಾಹ, ಅನುದಾನ ನೀಡುತ್ತಿದೆ, ಪೋಷಕರೂ ಸಹ ಕೇವಲ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳು ದಾಖಲಾದಲ್ಲಿ ಮಾತ್ರ ವಿದ್ಯಾವಂತರಾಗುತ್ತಾರೆಂಬ ಮನೋಭಾವ ತೊರೆಯಬೇಕು. ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ ಎಂದರು.
ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಶ್ರೀ ಎಂ. ಬಸವರಾಜಪ್ಪನವರು ಮಾತನಾಡಿ ಶೈಕ್ಷಣಿಕ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಶಿಕ್ಷಣಾಸಕ್ತರಿಗಾಗಿ ನಾಡಿನ ಶಿಕ್ಷಣ ತಜ್ಞ ಶ್ರೀ ವಿ.ಪಿ. ನಿರಂಜನಾರಾಧ್ಯರನ್ನು ಆಹ್ವಾನಿಸಿ ಒಂದು ದಿನದ ವಿಚಾರ ಸಂಕಿರಣ ಆಯೋಜಿಸಲಾಗುವುದೆಂದರು.
ಇಂದಿನ ನಿಯೋಗದಲ್ಲಿ ಹೆಚ್.ಎಸ್. ಮಂಜಪ್ಪ ಡಿ.ಎಸ್. ಮರುಳಪ್ಪ ಡಿ. ಕೆ. ಕುಮಾರಯ್ಯ, ಉಜ್ಜಜ್ಜಿ ರಾಜಣ್ಣ, ಬಿ. ನಾಗರಾಜು, ಮಲ್ಲಿಗಪ್ಪಾಚಾರ್, ಗೋವಿಂದ ರಾಜು ಇತರರು ಉಪಸ್ಥಿತರಿದ್ದರು.


