ರಾಮನಗರ: ವಿಕಲಚೇತನ ಬಾಲಕಿಯ ಮೃತದೇಹ ರಾಮನಗರ ತಾಲೂಕಿನ ಭದ್ರಾಪುರ ಗ್ರಾಮದ ಸಮೀಪದ ರೈಲು ಹಳಿಯ ಬಳಿ ಪತ್ತೆಯಾಗಿದ್ದು, ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ರಾಮನಗರ ತಾಲೂಕಿನ ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ ಕಾಲೋನಿಯ ವಿಕಲಚೇತನ ಬಾಲಕಿ ಖುಷಿ (14) ನಾಪತ್ತೆಯಾಗಿದ್ದಳು. ಸೋಮವಾರ ಮೇ 12ರಂದು ಆಕೆಯ ಮೃತದೇಹ ಭದ್ರಾಪುರ ಗ್ರಾಮದ ರೈಲು ಹಳಿ ಬಳಿಯಲ್ಲಿ ಪತ್ತೆಯಾಗಿತ್ತು.
ಘಟನೆ ಸಂಬಂಧ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ನಡೆಸಲಾಗಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಕೆಲ ಸಾಕ್ಷ್ಯಗಳನ್ನ ಎಫ್ ಎಸ್ ಎಲ್ ಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಅಲ್ಲದೆ, ಕೆಲವು ಸಂಶಯಾಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

