16ರಿಂದ 22ರವರೆಗೆ ಕರ್ನಾಟಕ ಕ್ರೀಡಾಕೂಟ: ತುಮಕೂರು ಜಿಲ್ಲೆಯ ಕ್ರೀಡಾಸಕ್ತರಿಗೆ, ನಾಗರಿಕರಿಗೆ ಹೆಮ್ಮೆಯ ವಿಷಯ: ಸಚಿವ ಡಾ.ಜಿ. ಪರಮೇಶ್ವರ್

ಭಾಸ್ಕರ ಪತ್ರಿಕೆ
0

ತುಮಕೂರು: ತುಮಕೂರು ನಗರದಲ್ಲಿ 2026 ಜನವರಿ 16 ರಿಂದ 22ರವರೆಗೆ ಕರ್ನಾಟಕ ಕ್ರೀಡಾಕೂಟ 2025–26 ನಡೆಯಲಿದೆ. ತುಮಕೂರು ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟ ತುಮಕೂರು ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. ಜಿಲ್ಲೆಯ ಯುವ ಜನರಿಗೆ ಇದು ಸ್ಪೂರ್ತಿಯಾಗಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಅಧಿಕೃತ ಪತ್ರ ಬರೆದಿರುವ ಅವರು, ಈ ಕ್ರೀಡಾಕೂಟದಲ್ಲಿ ವಿವಿಧ 27 ಕ್ರೀಡೆಗಳು ನಡೆಯುತ್ತಿದ್ದು, ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡಾಪಟುಗಳು ಸೇರಿದಂತೆ ಸುಮಾರು 9,000 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ಒಲಿಂಪಿಕ್ ಸಂಸ್ಥೆ ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಕರ್ನಾಟಕ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬಂದಿದ್ದು, ಪ್ರಸಕ್ತ ಸಾಲಿನ ಕ್ರೀಡಾಕೂಟದ ಆತಿಥ್ಯ ವಹಿಸುವ ಅವಕಾಶವನ್ನು ತುಮಕೂರು ಜಿಲ್ಲೆಗೆ ನೀಡಿರುವುದು ನಮ್ಮೆಲ್ಲ ತುಮಕೂರು ಜಿಲ್ಲೆಯ ಕ್ರೀಡಾಸಕ್ತರಿಗೆ ಹಾಗೂ ನಾಗರಿಕರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಕೃಷಿ, ತೋಟಗಾರಿಕೆ, ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ವಿವಿಧ ವಿಷಯಗಳಲ್ಲಿ ಸದಾ ಕ್ರಿಯಾಶೀಲವಾಗಿರುವ ತುಮಕೂರು ಕ್ರೀಡೆಯಲ್ಲೂ ಎಂದೂ ಹಿಂದೆಬಿದ್ದಿಲ್ಲ. ತುಮಕೂರು ಜಿಲ್ಲೆಯ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿರುವುದು ಹೊಸತೇನಲ್ಲ. ಅಂತೆಯೇ, ಮುಂದಿನ ಪೀಳಿಗೆಗೆ ಕ್ರೀಡಾಸಕ್ತಿಯನ್ನು ಬೆಳೆಸುವುದು, ಕ್ರೀಡೆಗಳಿಗೆ ಹೆಚ್ಚಿನ ಅವಕಾಶಗಳನ್ನು ಸಿಗುವಂತೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

2030ರ ಕಾಮನ್ ವೆಲ್ತ್ ಕ್ರೀಡಾಕೂಟ ಭಾರತದಲ್ಲಿ ನಡೆಯುತ್ತಿದೆ ಎಂಬುದು ಸಂತಸದ ವಿಷಯ. ಅಂತೆಯೇ, 2036ರ ಒಲಿಂಪಿಕ್ ಕ್ರೀಡಾಕೂಟಕ್ಕೂ ಭಾರತ ಆತಿಥ್ಯ ವಹಿಸುವ ಎಲ್ಲಾ ಸಾಧ್ಯತೆಗಳೂ ಇರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಯುವ ಸಮುದಾಯವನ್ನು ಕ್ರೀಡೆಗಳಿಗೆ ಪ್ರೋತ್ಸಾಹಿಸುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ಇದೇ ಜನವರಿ 16 ರಿಂದ 22ರವರೆಗೆ ನಡೆಯಲಿರುವ ಕರ್ನಾಟಕ ಕ್ರೀಡಾಕೂಟ ಸ್ಫೂರ್ತಿಯಾಗಲಿದೆ ಎಂದು ಹೇಳಿದ್ದಾರೆ.

ಜನವರಿ 16 ರಿಂದ 22ರವರೆಗೆ ನಡೆಯಲಿರುವ ಕರ್ನಾಟಕ ಕ್ರೀಡಾಕೂಟವು ತುಮಕೂರು ನಗರದ ವಿವಿಧ ಸ್ಥಳಗಳಲ್ಲಿ ನಡೆಯಲಿವೆ. ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಕೆನೋಯಿಂಗ್ ಮತ್ತು ಕಯಾಕಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಜಿಮ್ನಾಸ್ಟಿಕ್, ಹ್ಯಾಂಡ್ ಬಾಲ್, ಜೂಡೋ, ಕಬಡ್ಡಿ, ಖೋ-ಖೋ, ಲಾನ್ ಟೆನ್ನಿಸ್, ನೆಟ್ ಬಾಲ್, ಟೇಬಲ್ ಟೆನ್ನಿಸ್, ಟೇಕ್ವಾಂಡೋ, ವಾಲಿಬಾಲ್, ವೇಯ್ಟ್ ಲಿಫ್ಟಿಂಗ್, ರೆಸ್ಲಿಂಗ್, ಊಶೂ ಕ್ರೀಡೆಗಳು ವಿವಿಧ ಅಂಕಣಗಳಲ್ಲಿ ನಡೆಯಲಿದ್ದು, ಈ ಎಲ್ಲಾ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಾವೂ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ರಾಜ್ಯ, ದೇಶಕ್ಕೆ ಕೀರ್ತಿ ತರಬೇಕು ಎಂದು ಅವರು ಆಶಿಸಿದ್ದಾರೆ.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

The post 16ರಿಂದ 22ರವರೆಗೆ ಕರ್ನಾಟಕ ಕ್ರೀಡಾಕೂಟ: ತುಮಕೂರು ಜಿಲ್ಲೆಯ ಕ್ರೀಡಾಸಕ್ತರಿಗೆ, ನಾಗರಿಕರಿಗೆ ಹೆಮ್ಮೆಯ ವಿಷಯ: ಸಚಿವ ಡಾ.ಜಿ. ಪರಮೇಶ್ವರ್ appeared first on nammatumakuru.



from nammatumakuru https://ift.tt/DSTukjc

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*