ತುಮಕೂರು: ನೈಸ್ (NICE) ರಸ್ತೆ ಯೋಜನೆಗೆ ಸಿದ್ದಗಂಗಾ ಮಠದ ಜಮೀನು ನೀಡಿರುವ ವಿಚಾರ ಹಾಗೂ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಸ್ಪಷ್ಟನೆ ನೀಡಿದ್ದು, ಅಶೋಕ್ ಖೇಣಿ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದ್ದಾರೆ.
ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರಿಗೆ ಅಶೋಕ್ ಖೇಣಿ ‘ಚಿನ್ನದ ಕರಡಿಗೆ’ ಕಾಣಿಕೆ ನೀಡಿದ್ದಾರೆ ಎಂಬ ಹೇಳಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, “ಅಶೋಕ್ ಖೇಣಿ ಯಾವುದೇ ಚಿನ್ನದ ಕರಡಿಗೆ ನೀಡಿಲ್ಲ, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳೂ ಇಲ್ಲ. 2001–02ರ ನಂತರ ಅವರು ಮಠಕ್ಕೆ ಬಂದೇ ಇಲ್ಲ. ಸ್ವಾಮೀಜಿಯವರು ಧರಿಸಿದ್ದ ಆ ಕರಡಿಗೆಯನ್ನು ಹಲವು ವರ್ಷಗಳ ಹಿಂದೆ ‘ಹುಲಿಕುಂಟೆ ಸೋಮಣ್ಣ’ ಎಂಬ ಭಕ್ತರು ಬಹಳಷ್ಟು ಕಾಡಿ ಬೇಡಿ ಹಾಕಿಸಿದ್ದರು. ಖೇಣಿ ಅವರ ಹೇಳಿಕೆ ಕೇವಲ ಪ್ರಚಾರಕ್ಕಾಗಿ ಸೃಷ್ಟಿಸಿದ ಸುಳ್ಳು ಹಾಗೂ ಉತ್ಪ್ರೇಕ್ಷೆಯ ಮಾತು” ಎಂದು ಸ್ಪಷ್ಟಪಡಿಸಿದರು.
2001–2002ರಲ್ಲಿ ಖೇಣಿ ಅವರು ಮಠಕ್ಕೆ ಬಂದು ಸೋಂಪುರದಲ್ಲಿ ಮಠಕ್ಕೆ ದಾನವಾಗಿ ಬಂದಿದ್ದ 7 ಎಕರೆ 39 ಗುಂಟೆ ಜಮೀನಿನಲ್ಲಿ ರಸ್ತೆಗೆ ಜಮೀನು ಕೇಳಿದ್ದರು. ಮಠಕ್ಕೆ ನಿಶ್ಚಿತ ಆದಾಯ ತಂದುಕೊಡುವುದಾಗಿ ಮತ್ತು ಸೈಟ್ ನೀಡುವುದಾಗಿ ಭರವಸೆ ನೀಡಿದ್ದರೂ ಕಳೆದ 8 ವರ್ಷಗಳಿಂದ ಅವರ ಸಂಪರ್ಕವೇ ಸಿಕ್ಕಿಲ್ಲ. ಸದ್ಯ ನೈಸ್ ರಸ್ತೆಗೆ ಕೇವಲ 2 ಎಕರೆ ಮಾತ್ರ ಬಳಸಿಕೊಳ್ಳಲಾಗಿದ್ದು, ಉಳಿದ 6 ಎಕರೆ ಜಮೀನು ಹಾಗೆಯೇ ಖಾಲಿಯಿದೆ. ಸ್ವಾಧೀನಪಡಿಸಿಕೊಂಡ ಜಮೀನು ಬಳಕೆಯಾಗದಿದ್ದರೆ 25 ವರ್ಷಗಳಲ್ಲಿ ವಾಪಸ್ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದ್ದು, ರೈತರ ಒತ್ತಾಯದ ಮೇರೆಗೆ ಬಳಕೆಯಾಗದ ಜಮೀನನ್ನು ವಾಪಸ್ ನೀಡುವಂತೆ ಕೋರಿದ್ದೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಭೇಟಿ ವಿಚಾರ:
ರೈತರು ಬಹಳಷ್ಟು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಹಾಗೂ ಅನಿವಾರ್ಯ ಪರಿಸ್ಥಿತಿಯ ಕಾರಣದಿಂದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿತ್ತು. ಬಿಡಿಎಗೆ ಸಂಬಂಧಿಸಿದ ಕೆಲಸಗಳು ಹಾಗೂ ಮಠದ ಇತರೆ ವಿಚಾರಗಳ ಕುರಿತು ಸಂಪುಟ ಸಭೆಗೆ ಹೋಗಬೇಕಿದ್ದ ಕಾರಣ ನೇರವಾಗಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದು ಶ್ರೀಗಳು ವಿವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
The post ಚಿನ್ನದ ಕರಡಿಗೆ, ನೈಸ್ ರಸ್ತೆ ಜಮೀನು ವಿವಾದ: ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಂದ ಸ್ಪಷ್ಟನೆ! appeared first on nammatumakuru.
from nammatumakuru https://ift.tt/LWZeplx
