ಬೆಳ್ತಂಗಡಿ ಮಲಬಾರ್ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಡಾ.ಮಾಣಿ ವೆಳುತ್ತೇಡತ್ತು ಪರಂಬಿಲ್ ನಿಧನ

ಭಾಸ್ಕರ ಪತ್ರಿಕೆ
0

ಬೆಳ್ತಂಗಡಿ (ದಕ್ಷಿಣ ಕನ್ನಡ): ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹಾಗೂ ಉದನೆ ಸಮೀಪದ ನೆಲ್ಯಡ್ಕ ನಿವಾಸಿ ವಂ.ಫಾದರ್ ಡಾ. ಮಾಣಿ ವೆಳುತ್ತೇಡತ್ತು ಪರಂಬಿಲ್ (64) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ (ಅ. 1) ನಿಧನರಾಗಿದ್ದಾರೆ.

ಧರ್ಮಗುರುಗಳಾಗಿ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಧರ್ಮಸಭೆಯ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಅವರು ದೀರ್ಘಕಾಲ ಸಮರ್ಪಿತ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಗುರುಗಳು, ಭಕ್ತಾದಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ದಿ. ಮಾಣಿ ಮತ್ತು ತ್ರೇಸ್ಯಮ್ಮ ದಂಪತಿಯ ಪುತ್ರರಾದ ವಂ. ಡಾ. ಮಾಣಿ ವೆಳುತ್ತೇಡತ್ತು ಪರಂಬಿಲ್ ಅವರು 8 ಮಕ್ಕಳಲ್ಲಿ ಒಬ್ಬರು. ನೆಲ್ಯಡ್ಕ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಉದನೆಯ ಸೇಂಟ್ ಆಂಥೋನೀಸ್ ಪ್ರೌಢಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದ್ದರು. ಬಳಿಕ ತಲಶ್ಶೇರಿಯ ಸೇಂಟ್ ಜೋಸೆಫ್ ಮೈನರ್ ಸೆಮಿನರಿ ಹಾಗೂ ಕೋಟಯಂ ವಡವಾದೂರಿನ ಸೇಂಟ್ ಥಾಮಸ್ ಅಪೋಸ್ತೋಲಿಕ್ ಸೆಮಿನರಿಯಲ್ಲಿ ಧರ್ಮಗುರು ತರಬೇತಿ ಪಡೆದರು. ಮುಂದುವರಿದ ಶಿಕ್ಷಣಕ್ಕಾಗಿ ಮೈಸೂರಿನ ಕೆಎಸ್‌ ಒಯು ಹಾಗೂ ರೋಮ್‌ ನ ಪಾಂಟಿಫಿಕಲ್ ಯೂನಿವರ್ಸಿಟಿ ಆಫ್ ದಿ ಹೋಲಿ ಕ್ರಾಸ್‌ನಲ್ಲಿ ಅಧ್ಯಯನ ನಡೆಸಿ, 2006ರಲ್ಲಿ ರೋಮ್‌ನಿಂದ ಡಾಕ್ಟರೇಟ್ ಪದವಿ ಪಡೆದಿದ್ದರು.

ಇವರು ಬೆದೂರು, ಚೆಂಪನೋಡ, ಮುದೂರು, ಬಂಗಾಡಿ, ಧರ್ಮಸ್ಥಳ, ಬೆಳ್ತಂಗಡಿ, ಸಿದ್ದಾಪುರ (ಕೊಡಗು), ಜಡ್ಕಲ್ ಹಾಗೂ ಕಂಕನಾಡಿ ಸೇರಿದಂತೆ ಹಲವು ಧರ್ಮಕೇಂದ್ರಗಳಲ್ಲಿ ಅವರು ಧರ್ಮಗುರುಗಳಾಗಿ ಸೇವೆ ಸಲ್ಲಿಸಿ, ಧರ್ಮಸಭೆಯ ಅಭಿವೃದ್ಧಿ ಹಾಗೂ ಭಕ್ತರ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅಗಲಿದ ಧರ್ಮಗುರುಗಳ ಅಂತ್ಯಕ್ರಿಯೆ ಹಾಗೂ ಸಾರ್ವಜನಿಕ ಅಂತಿಮ ಗೌರವ ಸಲ್ಲಿಕೆಯ ಕಾರ್ಯಕ್ರಮಗಳ ವಿವರಗಳನ್ನು ಬೆಳ್ತಂಗಡಿ ಧರ್ಮಪ್ರಾಂತ್ಯ ಪ್ರಕಟಿಸಿದೆ:

ಅಕ್ಟೋಬರ್ 02 (ಇಂದು) ಮಧ್ಯಾಹ್ನ 3:00 ರಿಂದ 4:00 ರವರೆಗೆ: ಕಂಕನಾಡಿಯ ಸೇಂಟ್ ಅಲ್ಫೋನ್ಸಾ ಫೊರೇನ್ ಚರ್ಚ್‌ನಲ್ಲಿ ಸಾರ್ವಜನಿಕ ಅಂತಿಮ ಗೌರವ ಹಾಗೂ ಪ್ರಥಮ ಹಂತದ ಪ್ರಾರ್ಥನೆ.

ಅಕ್ಟೋಬರ್ 02 ಸಂಜೆ 5:30 ರಿಂದ ಅಕ್ಟೋಬರ್ 03 ಬೆಳಗ್ಗೆ 8:00 ರವರೆಗೆ: ಮಂಗಳೂರಿನ ಸೇಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಸಾರ್ವಜನಿಕ ಅಂತಿಮ ಗೌರವ ಮತ್ತು ದ್ವಿತೀಯ ಹಂತದ ಪ್ರಾರ್ಥನೆ.

ಅಕ್ಟೋಬರ್ 03 ಬೆಳಗ್ಗೆ 9:00 ರಿಂದ 10:00 ರವರೆಗೆ: ಉದನೆ ಸಮೀಪದ ಇಂಜಿರದಲ್ಲಿರುವ ಅವರ ಸಹೋದರ ಬೇಬಿ ವೆಳುತ್ತೇಡತ್ತುಪರಂಬಿಲ್ ಅವರ ಮನೆಯಲ್ಲಿ ಸಾರ್ವಜನಿಕ ಅಂತಿಮ ದರ್ಶನ.

ಅಕ್ಟೋಬರ್ 03 ಬೆಳಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ: ಉದನೆಯ ಸೇಂಟ್ ಥಾಮಸ್ ಫೊರೇನ್ ಚರ್ಚ್‌ನಲ್ಲಿ ಸಾರ್ವಜನಿಕ ಅಂತಿಮ ಗೌರವ.

ಅಕ್ಟೋಬರ್ 03 ಮಧ್ಯಾಹ್ನ 2:00 ಗಂಟೆಗೆ: ಉದನೆ ಚರ್ಚ್‌ನಲ್ಲಿ ಪವಿತ್ರ ಬಲಿಪೂಜೆ ಹಾಗೂ ಅಂತ್ಯಕ್ರಿಯೆಯ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಚಾನ್ಸಲರ್ ವಂ.ಫಾ. ಲಾರೆನ್ಸ್ ಪೂನೋಲಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ಬೆಳ್ತಂಗಡಿ ಮಲಬಾರ್ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಡಾ.ಮಾಣಿ ವೆಳುತ್ತೇಡತ್ತು ಪರಂಬಿಲ್ ನಿಧನ appeared first on Mahanayaka.



from Mahanayaka https://ift.tt/HVWkrfF

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*