ಸೋಮವಾರ ಮುಂಜಾನೆ ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪ ಸಂಭವಿಸಿದೆ. ಭಾರತೀಯ ಕಾಲಮಾನ ಇಂದು ಬೆಳಿಗ್ಗೆ 5:36 ಕ್ಕೆ ನವದೆಹಲಿಯಲ್ಲಿ 4.0 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. 5 ಕಿ.ಮೀ ಆಳದಲ್ಲಿ ದಾಖಲಾದ ಭೂಕಂಪನವು ರಾಜಧಾನಿಯ ಕೆಲವು ಭಾಗಗಳಲ್ಲಿ ಲಘು ನಡುಕವನ್ನುಂಟು ಮಾಡಿದೆ.
ನೋಯ್ಡಾ, ಗುರ್ಗಾಂವ್, ಫರಿದಾಬಾದ್ ಮತ್ತು ಗಾಜಿಯಾಬಾದ್ನಾದ್ಯಂತ ಬಲವಾದ ಭೂಕಂಪನದ ಅನುಭವವಾಗಿದೆ. ನಡುಕದ ಜೊತೆಗೆ ದೊಡ್ಡ ಶಬ್ದವೂ ಕೇಳಿಬಂದಿದೆ.
ಧೌಲಾ ಕುವಾನ್ ನ ದುರ್ಗಾಬಾಯಿ ದೇಶ್ಮುಖ್ ವಿಶೇಷ ಶಿಕ್ಷಣ ಕಾಲೇಜಿನ ಬಳಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಅಧಿಕಾರಿಗಳು ಯಾವುದೇ ತಕ್ಷಣದ ಹಾನಿ ಅಥವಾ ಸಾವುನೋವುಗಳನ್ನು ವರದಿ ಮಾಡಿಲ್ಲ. ಕಂಪನವನ್ನು ಅನುಭವಿಸಿದ ನಿವಾಸಿಗಳು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

