ಕೊಟ್ಟೂರು: ಪಟ್ಟಣದಲ್ಲಿ ಕೆಲವು ಬಡಾವಣೆಗಳು ಮೂಲ ಸೌಕರ್ಯಗಳಿಂದ ಬಳಲುತ್ತಿದ್ದು ಕೂಡಲೇ ಸ್ಥಳೀಯ ಆಡಳಿತ ಸೌಕರ್ಯ ಕಲ್ಪಿಸಲು ಮುಂದಾಗಬೇಕೆಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್ ಆಗ್ರಹಿಸಿದರು.
ಪಟ್ಟಣದ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಎ.ನಸರುಲ್ಲಾ ಇವರಿಗೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಹಾಗೂ ಹೌಸಿಂಗ್ ಬೋರ್ಡ್ ಕಾಲೋನಿ, ಜೆ.ಪಿ ನಗರ, ಸಮುದಾಯ ಆರೋಗ್ಯ ಕೇಂದ್ರದ ಪಕ್ಕದ ಬಡಾವಣೆ ಮುಂತಾದ ವಾರ್ಡ್ ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು ಮತ್ತು ಸೂರಿಲ್ಲದವರಿಗೆ ಸೂರು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ನೂತನ ಬಡಾವಣೆಗಳಲ್ಲಿ ನಿವೇಶನದ ಮಾಲೀಕರು ಸಂಪೂರ್ಣ ಅಭಿವೃದ್ಧಿಗೊಳಿಸಿದರೆ ಮಾತ್ರ ಖಾತಾನಕಲು ನೀಡಬೇಕು ಹಾಗೂ ಸಾರ್ವಜನಿಕ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬೇಕು. ಪ್ರತಿಯೊಂದು ವಾರ್ಡಿಗೆ ನಿಗದಿ ಪಡಿಸಿದ ಅನುದಾನ ನೀಡಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕು ಎಂದರು.
ಸೂರಿಗಾಗಿ ಸಮರ ಈ ಹಿಂದೆ ನೀಡಿದ ಮನವಿ ಸಲ್ಲಿಸಿದ ಬೇಡಿಕೆಗಳನ್ನು ಶೀಘ್ರದಲ್ಲೇ ಒದಗಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎ ಐ ಡಿ ಆರ್ ಎಂ ವಿಜಯನಗರ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್ ಎಚ್ಚರಿಕೆ ನೀಡಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ತಮ್ಮ ಬೇಡಿಕೆಗಳನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಘಟಕಾಧ್ಯಕ್ಷ ತೆಗ್ಗಿನಕೇರಿ ಕೊಟ್ರೇಶ್, ಸಿಪಿಎಂ ಪಕ್ಷದ ರಾಜ್ಯ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಕೆ.ರೇಣುಕಮ್ಮ, ಎ ಐ ಡಿ ಆರ್ ಎಂ ಸಂಘಟನೆ ಸದಸ್ಯರುಗಳಾದ , ಎಸ್.ಪ್ರಕಾಶ್, ಐ.ಗೋಪಿನಾಥ್, ಜಿ.ಕಾರ್ತಿಕ್, ಮಣಿಕಂಟ, ಅರುಣ್, ಸಾಗರ್,ಗೋಪಿನಾಥ್ , ಕೆ.ನಾಗರಾಜ್, ಅರುಣ್, ಜುಲಾನ್,ಪ್ರಭು, ಮೆಯಾ ,ಮುಂತಾದವರು ಪಾಲ್ಗೊಂಡಿದ್ದರು.

