ಅಕ್ಕಿರಾಂಪುರ ಪಿಡಿಓಗೆ ಶೋಕಾಸ್ ನೋಟಿಸ್: ಸಮಾಜದ ಮುಖಂಡರ ಮುಂದೆ ಕ್ಷಮೆಯಾಚನೆ

ಭಾಸ್ಕರ ಪತ್ರಿಕೆ
0


ಕೊರಟಗೆರೆ: ತಾಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯ ಪಿಡಿಓ ರವಿಕುಮಾರಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ.

ರಾಜ್ಯ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ ಆದೇಶದಂತೆ ಶ್ರೀ ಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿಯನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಆಚರಿಸಲು ಸೂಚನೆ ನೀಡಲಾಗಿತ್ತು. ಆದರೆ ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಸುಸಜ್ಜಿತ ಭಾವಚಿತ್ರವನ್ನು ಪ್ರದರ್ಶಿಸುವ ಬದಲು, ಪ್ಲೈವುಡ್ ಅಥವಾ ವುಡ್ ಶೀಟ್ ಮೇಲೆ ಫೋಟೋ ಅಂಟಿಸಿ ಗೌರವ ತಗ್ಗಿಸಿದ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗಿತ್ತು.

ಈ ಬಗ್ಗೆ ನಮ್ಮ ತುಮಕೂರು  ವರದಿ ಪ್ರಕಟ ಮಾಡಿದ ಬೆನ್ನಲ್ಲೇ, ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು.

ಕ್ಷಮೆ ಯಾಚಿಸಿದ ಪಿಡಿಓ:

ಅಕ್ಕಿರಾಂಪುರ ಪಿಡಿಓ ರವಿಕುಮಾರ್ ಅವರು ತಮ್ಮ ಉತ್ತರದಲ್ಲಿ, ಜಯಂತಿ ದಿನದಂದು ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಸ್ವತಃ ಹಾಜರಿರಲಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅವರು ಪಕ್ಕದ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಆದರೆ, ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ, ಲೆಕ್ಕ ಸಹಾಯಕರು ಮತ್ತು ಇತರ ಸಿಬ್ಬಂದಿ ಕೈವಾರ ತಾತಯ್ಯನವರ ಜಯಂತಿಯನ್ನು ಆಚರಿಸಿದ್ದಾರೆ. ಅವರ ಪ್ರಕಾರ, ಭಾವಚಿತ್ರ ಅಸಮರ್ಪಕ ರೀತಿಯಲ್ಲಿ ಪ್ರದರ್ಶಿಸಲಾಗಿರುವ ತಪ್ಪಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಮೌಖಿಕವಾಗಿ ಎಚ್ಚರಿಸಲಾಗಿದೆ. ಜೊತೆಗೆ, ಈ ಬಗ್ಗೆ ಸಮಾಜದ ಮುಖಂಡರ ಮುಂದೆ ಕ್ಷಮೆ ಯಾಚಿಸಿದ್ದಾರೆ.

ಸೂಕ್ತ ಶಿಸ್ತು ಕ್ರಮಕ್ಕೆ ಒತ್ತಾಯ :

ತಾಲ್ಲೂಕು ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಭಾವಚಿತ್ರ ಸ್ಥಾಪನೆ :

ನಮ್ಮ ತುಮಕೂರು ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ, ಅಕ್ಕಿರಾಂಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶ್ರೀ ಕೈವಾರ ತಾತಯ್ಯನವರ ಸುಸಜ್ಜಿತ ಭಾವಚಿತ್ರವನ್ನು ಸ್ಥಾಪಿಸಿ, ಪೂಜೆ ಸಲ್ಲಿಸಲಾಗಿದೆ. ಇದರಿಂದಾಗಿ, ಇನ್ನು ಮುಂದೆ ಈ ರೀತಿಯ ನಿರ್ಲಕ್ಷ್ಯ ಮರುಕಳಿಸದಂತೆ ಕ್ರಮ ವಹಿಸುವ ಭರವಸೆ ಪಿಡಿಓ ಅವರು ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*