00000000
Justice for Soujanya– ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಾವಳಿಯ ಜನತೆ ಭಾರೀ ಪ್ರತಿಭಟನೆ ನಡೆಸಿದ್ದರು. ಈ ಹೋರಾಟ ರಾಜ್ಯದ ರಾಜಧಾನಿ ಬೆಂಗಳೂರಿನವರೆಗೂ ಇತ್ತೀಚೆಗೆ ತಲುಪಿತ್ತು. ಆದರೆ ಇತ್ತೀಚೆಗೆ ಈ ಹೋರಾಟಕ್ಕೆ ಕೊಂಚ ಹಿನ್ನಡೆ ಕೂಡ ಆಗಿತ್ತು. ಆದ್ರೆ ಇದೀಗ ಸೌಜನ್ಯ ಪರ ಹೋರಾಟ ಮತ್ತೊಮ್ಮೆ ಎದ್ದು ನಿಲ್ಲುವ ಎಲ್ಲ ಸೂಚನೆಗಳು ಕಂಡು ಬಂದಿದೆ.
ದೂತ ಸಮೀರ್ ಎಂಬ ಯೂಟ್ಯೂಬರ್ ವೊಬ್ಬರು ಮಾಡಿರುವ ವಿಡಿಯೋ ಇದೀಗ ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ. ವಿಡಿಯೋ ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರನ್ನು ತಲುಪಿರುವ ವಿಡಿಯೋ ಇದೀಗ, ಸೌಜನ್ಯಗೆ ನ್ಯಾಯ ಸಿಗಬೇಕು ಎನ್ನುವ ಮತ್ತೊಂದು ಹೋರಾಟಕ್ಕೆ ಹೊಸ ಅಧ್ಯಾಯ ಬರೆದಿದೆ.
ಧರ್ಮಸ್ಥಳ ಎಂಬ ಊರಿನಲ್ಲಿ ನಡೆದ ಅಧರ್ಮದ ಕಥೆಯನ್ನ ಸಮೀರ್ ಎಐ ತಂತ್ರಜ್ಞಾನಗಳನ್ನು ಬಳಸಿಕೊಂಡು ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ಬಂಧಿತನಾದವ ನಿಜವಾದ ಆರೋಪಿಯಲ್ಲ, ಅಲ್ಲಿನ ಪ್ರಭಾವಿ ಕುಟುಂಬ ಆರೋಪಿಗಳನ್ನ ರಕ್ಷಿಸಲು ಪೊಲೀಸರನ್ನು ಬಳಸಿಕೊಂಡು ತನಿಖೆಯ ಹಾದಿ ತಪ್ಪಿಸುತ್ತಾರೆ. ಇಡೀ ಕೊಲೆ ಪ್ರಕರಣ ಸರಿಯಾಗಿ ತನಿಖೆ ನಡೆಯುವುದಿಲ್ಲ ಎನ್ನುವುದು ಸಮೀರ್ ನ ವಿಡಿಯೋದಲ್ಲಿ ಹೇಳಲಾಗಿರುವ ಪ್ರಮುಖ ಅಂಶವಾಗಿದೆ. ಇದಲ್ಲದೇ ಈಗಾಗಲೇ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ಸಾಕಷ್ಟು ಆರೋಪಗಳ ಬಗ್ಗೆ ಸಮೀರ್ ಸವಿಸ್ತಾರವಾಗಿ ಜನರಿಗೆ ಅರ್ಥವಾಗುವಂತೆ ವಿವರಿಸಿದ್ದಾರೆ.
ಸಮೀರ್ ಈ ವಿಡಿಯೋ ಮಾಡಿರುವ ಬೆನ್ನಲ್ಲೇ ಆತನ ಮನೆಯ ವಿಳಾಸ, ಫೋನ್ ನಂಬರ್ ಕೂಡ ಲೀಕ್ ಆಗಿದೆಯಂತೆ, ಇನ್ನು ಕೆಲವರು ಧರ್ಮ ಜಾತಿಯ ಹೆಸರಿನಲ್ಲಿ ಸಮೀರ್ ನನ್ನು ಟಾರ್ಗೆಟ್ ಕೂಡ ಮಾಡುತ್ತಿದ್ದಾರಂತೆ. ಇದಲ್ಲದೇ ಸಮೀರ್ ಹಣ ಪಡೆದು ಈ ವಿಡಿಯೋ ಮಾಡಿದ್ದಾನೆ ಎಂದು ಬಿಂಬಿಸುವ ಪ್ರಯತ್ನ ಕೂಡ ನಡೆಯುತ್ತಿದೆ ಎಂದು ಸಮೀರ್ ಹೇಳಿಕೊಂಡಿದ್ದಾರೆ.
2012ರ ಅಕ್ಟೋಬರ್ 6ರಂದು ಸೌಜನ್ಯಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ, ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಳ್ತಂಗಡಿ ಠಾಣಾ ಪೊಲೀಸರು ಈ ಕೇಸ್ ಗೆ ಸಂಬಂಧಿಸಿದಂತೆ ಸಂತೋಷ್ ರಾವ್ ಎಂಬಾತನನ್ನು ಬಂಧಿಸಿತ್ತು. ಸಿಬಿಐ ಕೂಡ ತನಿಖೆ ನಡೆಸಿ ಸಂತೋಷ್ ರಾವ್ ವಿರುದ್ಧ ಆರೋಪ ಪಟ್ಟಿಸಲ್ಲಿಸಿತ್ತು. ಆದರೆ, ಸಂತೋಷ್ ರಾವ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎನ್ನುವ ಕಾರಣಕ್ಕೆ ಸಂತೋಷ್ ರಾವ್ ನನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ ನೀಡಿತ್ತು.
ಕೊಲೆಗಾರನಿಲ್ಲದ ಕೊಲೆ, ಅತ್ಯಾಚಾರಿ ಇಲ್ಲದ ಅತ್ಯಾಚಾರ!?
ಸೌಜನ್ಯ ಕೇಸ್ ಗೆ ಸಂಬಂಧಿಸಿದಂತೆ ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿರುವ ಪ್ರಶ್ನೆಗಳು ಏನೆಂದರೆ, ಸಂತೋಷ್ ರಾವ್ ಅಪರಾಧಿ ಅಲ್ಲವಾದರೆ, ಈ ಪ್ರಕರಣದ ನಿಜವಾದ ಅಪರಾಧಿ ಯಾರು? ಕೊಲೆಗಾರನಿಲ್ಲದೇ ಕೊಲೆಯಾಗಲು ಸಾಧ್ಯವೇ?, ಅತ್ಯಾಚಾರಿ ಇಲ್ಲದೇ ಅತ್ಯಾಚಾರ ನಡೆಯಲು ಸಾಧ್ಯವೇ? ಸೌಜನ್ಯ ಮೇಲೆ ಅತ್ಯಾಚಾರ, ಕೊಲೆ ನಡೆದಿದೆ ಎನ್ನುವುದು ಸತ್ಯವಾದರೆ, ಇದನ್ನು ಮಾಡಿದವರು ಯಾರು? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ, ಇದರ ಜೊತೆಗೆ ಧರ್ಮಸ್ಥಳದಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆದ ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆ ಪ್ರಕರಣಗಳ ಬಗ್ಗೆಯೂ ಚರ್ಚೆ ಮತ್ತೆ ಆರಂಭಗೊಂಡಿದೆ.

