ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಚಿಂತೆ ಮಾಡದೇ ಎಲ್ಲವನ್ನು ಎದುರಿಸಿ ಹೆದರಿಸಿ ನಿಲ್ಲಬೇಕು : ಲತಾಮಣಿ ಎಂ. ಕೆ. ತುರುವೇಕೆರೆ

ಭಾಸ್ಕರ ಪತ್ರಿಕೆ
0


ತಿಪಟೂರು: ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಚಿಂತೆ ಮಾಡದೇ ಎಲ್ಲವನ್ನು ಎದುರಿಸಿ ಹೆದರಿಸಿ ನಿಲ್ಲಬೇಕು, ಸಮಸ್ಯೆಗಳನ್ನು ಸವಾಲುಗಳನ್ನಾಗಿ ತೆಗೆದುಕೊಂಡು ಸಾಧಿಸುವ ಸದೃಢ ಮನಸ್ಸಿದ್ದರೆ ಮಾತ್ರ ನಾವು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಜೀವನ ಸಾಗಿಸಬಹುದು. ಅದಕ್ಕೆ ನಿದರ್ಶನವಾಗಿ ಈ ವೃದ್ಧಾಶ್ರಮದಲ್ಲಿರುವ ಎಲ್ಲಾ ಹಳೇ ಬೇರುಗಳೆನಿಸಿದ ನಮ್ಮ ಹಿರಿ ತಲೆಗಳು ಹೊಸ ಚಿಗುರುಗಳೆನಿಸಿದ ಇಂದಿನ ಪೀಳಿಗೆಯ ಮಕ್ಕಳಿಗೆ ಮಾದರಿಯಾಗಬೇಕು ಎಂದು ತಿಪಟೂರು ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕು ಅಧ್ಯಕ್ಷೆ ಲತಾಮಣಿ ಎಂ ಕೆ ತುರುವೇಕೆರೆ ಅಭಿಪ್ರಾಯಪಟ್ಟರು.

 ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ತಿಪಟೂರು ವತಿಯಿಂದ ತಿಪಟೂರಿನ ಕೋಟೆ ಬೀದಿಯಲ್ಲಿರುವ ‘ಹಿರಿಯರ ಮನೆ’ ವೃದ್ಧಾಶ್ರಮದಲ್ಲಿ ಆಯೋಜಿಸಿದ್ದ ಅನುಭವಿಗಳೊಂದಿಗಿನ ಅನುಭಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಾವೆಲ್ಲಾ ಹುಟ್ಟುತ್ತಲೂ ಸಾಯುತ್ತಲೂ ಒಂಟಿಯಾಗಿ ಸಾಗುವ ಈ ಬದುಕಿನ ಪಯಣದ ಹಾದಿಯಲ್ಲಿ ಸಾಕಷ್ಟು ಬಂಧಗಳು ಬೆಸೆದುಕೊಂಡು, ಬಿಡಿಸಿಕೊಂಡು, ಬಿಟ್ಟುಹೋಗುತ್ತವೆ. ಬಿಡುಗಡೆಗೊಂಡ ಬಂಧನವನ್ನು ಮನದಲ್ಲಿ ಬಂಧಿಸಿ ನೆನೆದು ಬಳಲುವ ಬದಲು, ಬಂದದ್ದು ಬರಲಿ ಬದುಕುವ ಭರವಸೆಯೊಂದಿರಲಿ ಎಂಬ ಭಾವನೆ ನಮ್ಮೆಲ್ಲರಲ್ಲೂ ಬೆಳೆಯಲಿ ಎಂದು ಬಲ ತುಂಬಿದರು.

ಇಲ್ಲಿನ ವಯೋವೃದ್ಧರೆಲ್ಲರಿಗೂ ಆರೋಗ್ಯ ತಪಾಸಣೆ ಮಾಡಿ ಶಿಲ್ಪಾ ಎನ್. ಸಮುದಾಯ ಆರೋಗ್ಯ ಅಧಿಕಾರಿಯವರು ನಿತ್ಯದ ಬದುಕಿನಲ್ಲಿ ಚಿಂತೆಯನ್ನು ದೂರ ಮಾಡಿ, ಧ್ಯಾನದತ್ತ ತಮ್ಮ ಮನವನ್ನು ಕೇಂದ್ರೀಕರಿಸಿ, ಸರಳ ವ್ಯಾಯಾಮ ಉತ್ತಮ ಆಹಾರ ಸೊಂಪಾದ ಗಾಢ ನಿದ್ದೆಯನ್ನು ಅಳವಡಿಸಿಕೊಂಡರೆ ಆರೋಗ್ಯದಾಯಕ ಬದುಕು ನಮ್ಮದಾಗುತ್ತದೆ ಎಂಬ ಆರೋಗ್ಯದ ಗುಟ್ಟನ್ನು ತಿಳಿಸಿ, ತಮ್ಮ ಸುಪುತ್ರನ ಹುಟ್ಟಿದ ಹಬ್ಬವನ್ನು ವೃದ್ಧಾಶ್ರಮದ ಎಲ್ಲಾ ವಯೋವೃದ್ಧರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಭೋಜನ ಕೂಟವನ್ನು ಏರ್ಪಡಿಸುವ ಮೂಲಕ ಆಚರಿಸಿ ಆದರ್ಶ ಮೆರೆದರು.

ಜಾಹಿರಾತು:

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ. ಭಾಸ್ಕರ್ ಆಚಾರ್ ಪತ್ರಿಕಾ ಸಂಪಾದಕರು ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಎಲ್ಲಾ ಕಾರ್ಯಕ್ರಮಗಳು ಸರಳ ಸುಂದರ ಹಾಗೂ ಮಹತ್ವಪೂರ್ಣವಾದ ಸಾರ್ಥಕತೆಯನ್ನು ಪಡೆದವುಗಳಾದ್ದರಿಂದ ನಮ್ಮ ಸಹಕಾರ ಸದಾ ಇರುತ್ತದೆ ಎಂದರು. ಹಾಗೂ ಸುಬೇದಾರ್ ಚಂದ್ರಶೇಖರ್ ಅವರು ವೇದಿಕೆಗೆ ಶುಭ ಕೋರುತ್ತಾ ಮಡಿದ ತಮ್ಮ ಮಡದಿಯ ಎಲ್ಲಾ ವಸ್ತ್ರಗಳನ್ನು ಈ ವೃದ್ಧರಿಗೆ ದಾನ ಕೊಡುವೆನು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೂಜಾರವರು ನಿರೂಪಿಸಿದರು ಶುಭ ವಿಶ್ವಕರ್ಮರವರು ಪ್ರಾರ್ಥಿಸಿದರು ರಂಜಿತಾರವರು ಸ್ವಾಗತಿಸಿದರು ಕುಸುಮ ಕೆ ಜೆ ವಂದಿಸಿದರು ಹಾಗೂ ಕಲ್ಪತರು ಸೆಂಟ್ರಲ್ ಶಾಲೆಯ ಮಕ್ಕಳು ನರ್ತಿಸುವ ಮೂಲಕ ಹಿರಿಯರ ಮನ ತಣಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*